ಚಿನ್ನ, ನೀನಿಲ್ಲದೆ ಬಿಮ್ಮೆನ್ನುತಿದೆ ರಮ್ಯೋದ್ಯಾನ

ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ
ನಿನ್ನ ಜೊತೆಯಿಲ್ಲ,ದೆ ಮಾತಿಲ್ಲದೆ ಮನ ವಿಭ್ರಾಂತ

ಕಣ್ಣನೆ ದಣಿಸುವ ಈ ಪಡುವಣ ಬಾನ್ ಬಣ್ಣಗಳು,
ಮಣ್ಣನೆ ಹೊನ್ನಿನ ಹಣ್ಣಾಗಿಸುವೀ ಕಿರಣಗಳು,
ಹಚ್ಚನೆ ಹಸುರಿಗೆ ಹಸೆಯಿಡುತಿರುವೀ ಖಗ ಗಾನ –
ಚಿನ್ನ, ನೀನಿಲ್ಲದೆ ಬಿಮ್ಮೆನ್ನುತಿದೆ ರಮ್ಯೋದ್ಯಾನ.

ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ;  
ಬರುವೆಯೋ, ಬಾರೆಯೋ ನೀನೆನ್ನುತಿದೆ ಹಾ! ಸಂದೇಹ.
ಮುತ್ತಿದಾಲಸ್ಯವ ಬಿಗಿ ಮೌನವ ಹೊಡೆದೋಡಿಸು ಬಾ
ಮತ್ತೆ ಆ ಸಮತೆಯ ಹಿರಿ ಬೇಲಿಯ ಸರಿ ನಿಲ್ಲಿಸು ಬಾ

ಪ್ರೊ.ಕೆ.ಎಸ್.ನಿಸಾರ್ ಅಹಮದ್