ನೀ ಹೊರಟಿದ್ದೀಗ ಎಲ್ಲಿಗೆ? 

ಘಮ ಘಮ ಘಮಾಡಿಸ್ತಾವ ಮಲ್ಲಿಗೆ
ನೀ ಹೊರಟಿದ್ದೀಗ ಎಲ್ಲಿಗೆ?

ತುಳುಕ್ಯಾಡುತ್ತಾವ ತೂಕಡಿಕಿ ಎವಿ ಅಪ್ಪುತ್ತಾವ ಕಣ್ ದುಡುಕಿ
ಕನಸು ತೇಲಿ ಬರುತ್ತಾವ ಹುಡುಕಿ
ನೀ ಹೊರಟಿದ್ದೀಗ ಎಲ್ಲಿಗೆ?

ಚಿಕ್ಕಿ ತೋರಿಸ್ತಾವ ಚಾಚಿ ಬೆರಳ ಚಂದ್ರಮ ಕನ್ನಡಿ ಹರಳ
ಮನ ಸೋತು ಆಯಿತು ಮರುಳ
ನೀ ಹೊರಟಿದ್ದೀಗ ಎಲ್ಲಿಗೆ?

ನೆರಳಲ್ಲಾಡುತ್ತಾವ ಮರದ ಬುಡಕ್ಕ ಕೇರಿ ತೇರಿ ನೂಗುತ್ತಾವ ದಡಕ್ಕ
ಹಿಂಗ ಬಿಟ್ಟು ಇಲ್ಲಿ ನನ್ನ ನಡಕ
ನೀ ಹೊರಟಿದ್ದೀಗ ಎಲ್ಲಿಗೆ?

ನನ್ನ ನಿನ್ನ ಒಂದತನದಾಗ ಹಾಡು ಹುಟ್ಟಿ ಒಂದು ಮನದಾಗ
ಬೆಳದಿಂಗಳಾತು ಬನದಾಗ
ನೀ ಹೊರಟಿದ್ದೀಗ ಎಲ್ಲಿಗೆ?

ಬಂತ್ಯಾಕ ನಿನಗ ಇಂದ ಮುನಿಸು ಬೀಳಲಿಲ್ಲ ನನಗ ಇದರ ಕನಸು
ರಾಯ ತಿಳಿಯಲಿಲ್ಲ ನಿನ್ನ ಮನಸು
ನೀ ಹೊರಟಿದ್ದೀಗ ಎಲ್ಲಿಗೆ?

– ಅಂಬಿಕಾತನಯದತ್ತ